ಕನ್ನಡ ಕಥೆ, ಸೌಮ್ಯ ಸಿ ಡಿ

ಪಿತೃ ವಾತ್ಸಲ್ಯ

ಎಲ್ಲವೂ ನಿಶ್ಚಿಂತೆಯಿಂದ ನಡೆಯುತ್ತಿದ್ದ ಸಮಯ ಇದಾಗಿತ್ತು.ಹೀಗಿರಬೇಕಾದರೆ ಒಂದು ದಿನ ಅನಿರೀಕ್ಷಿತವಾದಂತಹ ಘಟನೆ ನಡೆಯುತ್ತದೆ.
ನಿಶಾಳ ತಂದೆಗೆ ರಸ್ತೆ ಅಪಘಾತವಾಗುತ್ತದೆ.ಆ ಊರಿನ ಜನರು ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ.ನಿಶಾ ಅಪ್ಪನಿಗೆ ಒಬ್ಬಳೇ ಮಗಳು.ಅವಳು ಪರಊರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದಳು.ಅಪ್ಪನಿಗೆ ಆದ ಅಪಘಾತದ ಸುದ್ದಿಯನ್ನು ಕೇಳಿ ಭಯ,ಆತಂಕಗೊಂಡು ತನ್ನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಬಿಟ್ಟು ಅಪ್ಪನನ್ನು ನೋಡಲು ಆಸ್ಪತ್ರೆಗೆ ಬರುತ್ತಾಳೆ.ಅಪ್ಪನಿಗೆ ಆದಂತಹ ಗಾಯಗಳನ್ನು ನೋಡಿ,ಅವರ ಪರಿಸ್ಥಿತಿಯನ್ನು ನೋಡಲಾರದೆ ಅಳುತ್ತಾಳೆ.ಹೀಗೆ ನಿಶಾ ಆಸ್ಪತ್ರೆಯಲ್ಲಿ ಒಂದು ಕಡೆ ಕುಳಿತುಕೊಂಡು ನೆನಪುಗಳ ಪುಟಗಳನ್ನು ಒಂದೊಂದಾಗಿ ಮನಸ್ಸಿನಲ್ಲಿಯೇ ಓದಲಾರಂಭಿಸುತ್ತಾಳೆ.

ನಾನು ಬಾಲ್ಯದಲ್ಲಿದ್ದಾಗ ಅಮ್ಮನನ್ನು ಕಳೆದುಕೊಂಡೆ.ನನ್ನನ್ನು ಅಪ್ಪ ಅಮ್ಮ ಇಬ್ಬರ ಸ್ಥಾನದಲ್ಲಿ ನಿಂತು ಪೋಷಿಸಿದವರು ಅಪ್ಪ.
ತಾಯಿಯ ಪ್ರೀತಿ,ವಾತ್ಸಲ್ಯ,ಮಮತೆ, ಪ್ರೋತ್ಸಾಹ,ಸಲಹೆ ಎಲ್ಲವನ್ನು ಅಪ್ಪನೇ ನೀಡುತ್ತಿದ್ದರು.ನಾನು ಬಾಲ್ಯದಲ್ಲಿದ್ದಾಗ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಜಾತ್ರೆಗೆ ಕರೆದುಕೊಂಡು ಹೋದ ಕ್ಷಣ ನೆನಪಿಸಿಕೊಂಡಾಗಲೆಲ್ಲಾ ಮೈ ರೋಮಾಂಚನವಾಗುತ್ತದೆ. ತಾನು ಸಂತೆಯಲ್ಲಿ ಕೇಳಿದ ಎಲ್ಲಾ ವಸ್ತುಗಳನ್ನು ತೆಗೆದುಕೊಡುತ್ತಿದ್ದ ಸಾಹುಕಾರ ಅಪ್ಪ. ಇದಕ್ಕಾಗಿ ಅಪ್ಪ ಕೆಲವು ಬಾರಿ ಗದರಿದ್ದು,ಇನ್ನೂ ಕೆಲವು ಬಾರಿ ನಾನು ಪೆಟ್ಟು ತಿಂದಿದ್ದು ಇದೆ.ಅಪ್ಪ ಮನೆಗೆ ಬಂದರು ಎಂದಾಗ ನಾನು ಒಂದು ಮೂಲೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದೆ. ಅಪ್ಪನಿಗೆ ಮೂಗಿನ ತುದಿಯಲ್ಲಿ ಕೋಪವಿದ್ದರೂ,ಹೃದಯದಲ್ಲಿ ಬೆಟ್ಟದಷ್ಟು ಪ್ರೀತಿ ಇತ್ತು.ಆದರೆ ನನಗೆ ಅಪ್ಪನನ್ನು ಕಂಡರೆ ಭಯವಾಗುತ್ತಿತ್ತು.

ನನ್ನ ಓದಿಗಾಗಿ ಶ್ರಮಿಸುತ್ತಿದ್ದ ಜೀವ ಅಪ್ಪ. ನಾನು ಸೋತಾಗ ಪ್ರೋತ್ಸಾಹಕ ನುಡಿಗಳನ್ನು ತಿಳಿಸಿ, ಸಕರಾತ್ಮಕವಾಗಿ ಚಿಂತಿಸಿ, ಸವಾಲಾಗಿ ಸ್ವೀಕರಿಸಿ, ಮುನ್ನಡೆಯಲು ಪ್ರೇರಣೆಯನ್ನು ನೀಡುತ್ತಿದ್ದವರು ಅಪ್ಪ.ಅತಿಯಾದ ಕಾಳಜಿಯನ್ನು ತೋರುತ್ತಿದ್ದರು. ಯಾವ ರೀತಿ ಕಾಳಜಿ ಇತ್ತೆಂದರೆ ಒಬ್ಬಳನ್ನೇ ಹೊರಗೆ ಹೋಗಲು ಕೂಡ ಬಿಡುತ್ತಿರಲಿಲ್ಲ.ಎಲ್ಲಿ ನನಗೆ ತೊಂದರೆಯಾಗಬಹುದೆಂಬ ಭಯ,ಆತಂಕ ಅವರಿಗಿತ್ತು.ಹಾಗೆಯೇ ಓದುತ್ತಾ ಮುಂದೆ ಪದವಿ ಪೂರ್ವ ಹಂತದಲ್ಲಿ ವಿಷಯಗಳ ಆಯ್ಕೆ ಬಂದಾಗ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಅಪ್ಪನ ಆಸೆಯಾಗಿತ್ತು ಮತ್ತು ಆಜ್ಞೆಯಾಗಿತ್ತು.ವಿಜ್ಞಾನ ವಿಭಾಗದಲ್ಲಿ ಓದಿ,ಮುಂದೆ ಉತ್ತಮ ವೈದ್ಯೆಯಾಗಬೇಕು ಎಂಬುದು ಅಪ್ಪನ ಕನಸಾಗಿತ್ತು.ಅಂದು ನಾನು ಅವರ ಉದ್ದೇಶವನ್ನು ಅರಿತುಕೊಳ್ಳದೆ,ತನಗೆ ಸ್ವಾತಂತ್ರ್ಯವೇ ಇಲ್ಲ ಎಂದು ಭಾವಿಸಿದ್ದೆ.

ಅಪ್ಪನ ಒತ್ತಾಯಕ್ಕೆ ಮಣಿದು ವಿಜ್ಞಾನ ವಿಭಾಗದಲ್ಲಿ ಸೇರಿಕೊಂಡು,ಮುಂದೆ ತನಗರಿವಿಲ್ಲದೆ ಆ ವಿಷಯದಲ್ಲಿ ಆಸಕ್ತಿ ಹೆಚ್ಚಾಗುತ್ತಾ ಹೋಯಿತು.ಮನೆಯಲ್ಲಿ ಅಪ್ಪನ ಪ್ರೋತ್ಸಾಹ ಸಂಪೂರ್ಣವಾಗಿರುತ್ತಿತ್ತು.ಮುಂದೆ ನಾನು ಸ್ನಾತಕೋತ್ತರ ಪದವಿಯಲ್ಲಿ ಚಿನ್ನ ಪದಕ ಪಡೆದು ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದೇನು. ಆ ಸಂದರ್ಭದಲ್ಲಿ ಅಂದು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅಪ್ಪ ನಿರ್ಧಾರ ತೆಗೆದುಕೊಂಡದ್ದು ಸರಿ ಎಂದೆನಿಸಿತು.ತಾನು ಅಂದು ಅಪ್ಪನ ಬಗ್ಗೆ ಅಂದುಕೊಂಡಿದ್ದ ಭಾವನೆ ತಪ್ಪೆಂದು ಆಗ ಮನವರಿಕೆಯಾಗಿತ್ತು.ಅಪ್ಪ ತನ್ನ ಹಿತಕ್ಕಾಗಿ ಹಲವಾರು ನಿಯಮಗಳನ್ನು ರೂಪಿಸಿದ್ದರು ಹೊರತು ನನ್ನ ಸ್ವಾತಂತ್ರವನ್ನು ಕಸಿದು ಕೊಂಡಿರಲಿಲ್ಲ ಎಂಬುದು ಅರ್ಥವಾಯಿತು.ಪದವಿ ಪೂರ್ವ ಹಂತದಲ್ಲಿದ್ದಾಗ ಯಾವ ವಿಷಯಗಳನ್ನು ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿದ್ದ ನನ್ನ ಮನಸ್ಥಿತಿಯನ್ನು ಅರಿತುಕೊಂಡಿದ್ದ ಅಪ್ಪ,ನನಗೆ ವಿಜ್ಞಾನ ವಿಷಯವನ್ನು ತೆಗೆದುಕೊಳ್ಳುವಲ್ಲಿ ಪ್ರೋತ್ಸಾಹಿಸಿದರು.ಎಲ್ಲಿ ಸ್ನೇಹಿತರೊಡನೆ ಸೇರಿಕೊಂಡು ಅವರು ಆಯ್ಕೆ ಮಾಡಿದ ವಿಷಯವನ್ನು,ತನ್ನ ಆಸಕ್ತಿಯ ವಿರುದ್ಧದ ವಿಷಯವನ್ನು ಆಯ್ಕೆ ಮಾಡುತ್ತೇನೆ ಎಂಬ ಭಯ ಅಪ್ಪನಿಗಿತ್ತು. ಇಷ್ಟೆಲ್ಲಾ ಕಾಳಜಿ,ಪ್ರೀತಿ ತೋರಿಸುತ್ತಿದ್ದ ಅಪ್ಪನ ಬಗ್ಗೆ ನಾನು ಅಂದು ತಪ್ಪು ತಿಳಿದುಕೊಳ್ಳಬಾರದಿತ್ತು ಎಂಬುದು ಮನಸ್ಸಿನಲ್ಲಿಯೇ ಕೊರೆಯುತ್ತಿತ್ತು.

ಹೀಗೆ ಆಲೋಚನೆಯಲ್ಲಿಯೇ ಕಳೆದುಹೋಗಿದ್ದ ನಿಶಾಗೆ ಆ ಆಸ್ಪತ್ರೆಯ ದಾದಿ ಬಂದು ಕರೆದಾಗಲೇ ನೈಜ ಸ್ಥಿತಿಯ ಅರಿವಾದದ್ದು. ನಿಶಾಳ ಮುಂದೆ ಅಪ್ಪ ಹಾಸಿಗೆಯಲ್ಲಿ ಮಲಗಿದ್ದರು.ಅವಳು ಅಪ್ಪನನ್ನೇ ದಿಟ್ಟಿಸುತ್ತಾ ನೋಡುತ್ತಾಳೆ.ಅವಳ ಕಣ್ಣಿಂದ ಕಂಬನಿ ಜಾರಿ ಅಪ್ಪನ ಕೆನ್ನೆಯ ಮೇಲೆ ಬೀಳುತ್ತದೆ.ಮಲಗಿದ್ದ ಅಪ್ಪ ಎಚ್ಚರಗೊಂಡು,ತನ್ನ ಎಲ್ಲಾ ನೋವನ್ನು ಬದಿಗಿಟ್ಟು ಮಗಳ ಜೊತೆ ಏನಾಯಿತು?ಏಕೆ ಅಳುತ್ತಿರುವೆ ಎಂದು ವಿಚಾರಿಸುತ್ತಾರೆ.ನಿಶಾ ನೋವು ತುಂಬಿದ ಧ್ವನಿಯಲ್ಲಿ ನಾನು ಅಂದು ನಿಮ್ಮ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಎಂದು ಹೇಳುತ್ತಾ,ತಾನು ಅಂದುಕೊಂಡಿದ್ದ ವಿಷಯದ ಬಗ್ಗೆ ಅಪ್ಪನಿಗೆ ವಿವರಿಸುತ್ತಾಳೆ.ಹಾಗೂ ಕ್ಷಮೆ ಕೇಳುತ್ತಾಳೆ.ಅಪ್ಪ ನಿಶಾಳನ್ನು ಕ್ಷಮಿಸುತ್ತಾರೆ.
ಅಪ್ಪನಿಗೆ ಆದಂತಹ ಸಣ್ಣ-ಪುಟ್ಟ ಗಾಯಗಳು ಕಡಿಮೆ ಆಗುವವರೆಗೂ ಅಪ್ಪ ಜೊತೆ ಆಸ್ಪತ್ರೆಯಲ್ಲಿದ್ದು ಅಪ್ಪನ ಸೇವೆಯನ್ನು ಮಾಡುತ್ತಿರುತ್ತಾಳೆ ನಿಶಾ. ಒಂದು ದಿನ ಅವಳು ಭಾವುಕಳಾಗಿ ಅಪ್ಪ"ನಿನ್ನ ಪ್ರೀತಿಗೆ ಸರಿಸಾಟಿ ಯಾರು ಮತ್ತು ಯಾವುದು ಇಲ್ಲ.ನಿಮ್ಮ ಪ್ರತಿ ನಿರ್ಧಾರಗಳು ನನ್ನ ಜೀವನದ ತಿರುಳನ್ನು ಬದಲಾಯಿಸಿತು.ಇಂದು ನಾನು ಈ ಸ್ಥಿತಿಗೆ ಬರಲು ನೀವೇ ಕಾರಣ"ಎಂದು ಅಪ್ಪನನ್ನು ಬಿಗಿಯಾಗಿ ಅಪ್ಪಿಕೊಂಡು ಅಳುತ್ತಾಳೆ.
ಅಪ್ಪನನ್ನು ಆಸ್ಪತ್ರೆಯಿಂದ ಕರೆದುಕೊಂಡು ತನ್ನ ಜೊತೆ ಮನೆಗೆ ಕರೆದುಕೊಂಡು ಹೋಗುತ್ತಾಳೆ.ಹೀಗೆ ಅಪ್ಪ ಮಗಳ ಜೊತೆ ಹಾಯಾಗಿ ತಮ್ಮ ವೃದ್ಧಾಪ್ಯ ಜೀವನವನ್ನು ಕಳೆಯುತ್ತಾರೆ.

✍️ ಸೌಮ್ಯ.ಸಿ.ಡಿ.ಎಲಿಮಲೆ.
ತೃತೀಯ ಕಲಾ ವಿಭಾಗ.
ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ.

Comments