ಕನ್ನಡ ಕಥೆ, ಸೌಮ್ಯ ಸಿ ಡಿ

*ಶಂಭುವಿನ ಸ್ವಾಭಿಮಾನ*

ಒಂದು ಪುಟ್ಟ ಊರು. ಆ ಊರಿನಲ್ಲಿ ಸಣ್ಣ ಮನೆಯಲ್ಲಿ ಶಂಭು ಹಾಗೂ ಅವನ ಕುಟುಂಬದವರು ವಾಸಿಸುತ್ತಿದ್ದರು. ಇವರದ್ದು ತುಂಬಾ ಬಡ ಕುಟುಂಬ.ದುಡಿದರೆ ಮಾತ್ರ ಊಟ ಎನ್ನುವ ಪರಿಸ್ಥಿತಿ.ಇಬ್ಬರು ಕೂಲಿ ಕೆಲಸಕ್ಕೆ ಹೋಗುವವರು. ಅವರು ಅವಿದ್ಯಾವಂತರು ಕೂಡ ಹೌದು.ಶಂಭುವಿಗೆ ಈ ಬಡತನ ಸಾಕಾಗಿ ಹೋಗಿತ್ತು. ಅವನು ತಾನು ಓದಿ ಮುಂದೆ ಒಳ್ಳೆಯ ಉದ್ಯೋಗಕ್ಕೆ ಸೇರಿ ಸಮಾಜ ಸೇವೆ ಮಾಡಬೇಕು ಎಂದು ಕನಸು ಕಾಣುತ್ತಿದ್ದ. ಅವನು ಕಷ್ಟಪಟ್ಟು ದುಡಿಯುವುದರ ಜೊತೆಗೆ,ಶಾಲೆಗೆ ಹೋಗಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ.ಕಷ್ಟಪಟ್ಟು ಕಲಿಯುತ್ತಿದ್ದ ಶಂಭುವಿಗೆ ಜೀವನದಲ್ಲಿ ಮುಂದೆ ಬರಬೇಕು ಏನಾದರೂ ಸಾಧಿಸಬೇಕು ಎಂಬ ಆಸೆ ಆಕಾಂಕ್ಷೆಗಳು ಬೆಳೆಯತೊಡಗಿತು.

ಮನೆಯ ಕಷ್ಟಗಳ ನಡುವೆಯೂ ಅವನು ಎಸ್. ಎಸ್. ಎಲ್.ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಗೊಂಡ.ನಂತರ ಮುಂದೆ ಓದಬೇಕು ಅನ್ನುವ ಆಸೆ,ಆದರೆ ಬಡತನ.ಕಾಲೇಜು ಮೆಟ್ಟಿಲು ಹತ್ತಬೇಕಾಗಿದ್ದ ಶಂಭು ಕೆಲಸಕ್ಕೆ ಸೇರಿಕೊಂಡ.ದಿನಾ ಕೆಲಸಕ್ಕೆ ಹೋಗಿ ಹಣ ಸಂಪಾದಿಸಿ, ಕೂಡಿಡುತ್ತಿದ್ದ.ಇದರ ಜೊತೆಗೆ ಅವನು ತನ್ನ ಸಹಪಾಠಿಗಳೊಂದಿಗೆ ಕಾಲೇಜಿನ ವಿಷಯವನ್ನು, ಚಟುವಟಿಕೆಗಳ ಬಗ್ಗೆ ಕೇಳಿ ಮಾಹಿತಿ ಪಡೆದುಕೊಳ್ಳುತ್ತಿದ್ದ. 

ಒಂದು ದಿನ ಅವನು ತನ್ನ ಮುಂದಿನ ಓದುವಿಕೆಯ ಹಂಬಲವನ್ನು ತನ್ನ ಧಣಿಗಳ ಮುಂದೆ ಪ್ರಸ್ತಾಪಿಸಿದ.ಅವರು ಶಂಭುವಿಗೆ ಉಪಾಯ ತಿಳಿಸಿದರು.ಅವನಿಗೆ ನೇರವಾಗಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ಬರೆಯಲು ತಿಳಿಸಿದರು. ಹಾಗೆಯೇ ಅವನು ದ್ವಿತೀಯ ಪಿ.ಯು.ಸಿ ಪರೀಕ್ಷೆ ಬರೆದು ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನಾಗುತ್ತಾನೆ‌. ನಂತರ ಮುಂದೆ ಓದಲು ಏನು ಮಾಡುವುದು ಎಂದು ಚಿಂತಿಸುತ್ತಾನೆ ಶಂಭು.ಎರಡು ವರ್ಷ ದುಡಿದು ಹಣ ಸಂಪಾದಿಸಿ ನಂತರ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸುವಂತೆ ಯೋಚಿಸುತ್ತಾನೆ. ಹಾಗೆಯೇ ಎರಡು ವರ್ಷ ಕಷ್ಟಪಟ್ಟು ದುಡಿದು ಹಣ ಸಂಪಾದಿಸುತ್ತಾನೆ. ಇದೇ ಸಂದರ್ಭದಲ್ಲಿ ದುರಾದೃಷ್ಟವೆಂಬಂತೆ ಅವನ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿಯುತ್ತಾರೆ. 
 ಈ ಎಲ್ಲದರ ನಡುವೆಯೂ ತನ್ನ ಪದವಿ ವ್ಯಾಸಂಗ ಮಾಡಲು ನಿರ್ಧರಿಸುತ್ತಾನೆ.

ಶಂಭು ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಾ, ತಾಯಿಯ ಆರೈಕೆ ಮಾಡುತ್ತಾ,ಕಾಲೇಜಿಗೆ ಹೋಗುತ್ತಾನೆ. "ಕಷ್ಟಪಟ್ಟರೆ ಸುಖ ಸಿಗುವುದು" ಎಂಬ ಮಾತಿನಂತೆ ಅವನು ಪದವಿ ಹಂತದಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣನಾಗುತ್ತಾನೆ. ಹೀಗೆ ಪದವಿ ಹಂತದಲ್ಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೊರಹೊಮ್ಮುತ್ತಾನೆ. ನಂತರದಲ್ಲಿ ತಾಯಿಯ ಆರೋಗ್ಯ ಚೇತರಿಸಿಕೊಳ್ಳುತ್ತದೆ.
ಮುಂದೆ ಅವನು ತನ್ನ ಗುರಿಯನ್ನು ತಲುಪಲು, ತನ್ನ ಪ್ರಯತ್ನ ,ಪ್ರತಿಭೆಗೆ ತಕ್ಕ ಪ್ರತಿಫಲವನ್ನು ಪಡೆದುಕೊಳ್ಳಲು ಒಂದು ಉದ್ಯೋಗ ಬೇಕು ಎಂದು ಯೋಚಿಸುತ್ತಾನೆ. ಮನೆಯ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಶಂಭು ತಾನು ಕೆಲಸಕ್ಕೆ ಸೇರಿ ಮನೆಯ ಕಷ್ಟವನ್ನು ದೂರ ಮಾಡುವ ಯೋಜನೆ ಹಾಕುತ್ತಾನೆ. 
ಹೀಗೆ ಅವನು ತನ್ನನ್ನು ಓದಿಸಿದ ಧಣಿಯ ಸಹಾಯದಿಂದ ಪಟ್ಟಣಕ್ಕೆ ಕೆಲಸ ಹುಡುಕಲು ಹೊರಡುತ್ತಾನೆ.

ಪದವಿ ಮುಗಿಸಿದ್ದ ಶಂಭುವಿಗೆ ಕೆಲಸ ಸಿಗುವುದು ದೊಡ್ಡ ಮಾತಾಗಿರಲಿಲ್ಲ.ಒಳ್ಳೆಯ ಪ್ರತಿಭಾವಂತ ಹುಡುಗನಾಗಿದ್ದ ಇವನು ಬುದ್ಧಿವಂತ ಕೂಡ ಹೌದು.ನಗರಕ್ಕೆ ಹೋಗಿ ಅಲ್ಲಿಯ ಕಂಪನಿ ಕೆಲಸಕ್ಕೆ ಸಂದರ್ಶನವನ್ನು ಒಳ್ಳೆಯ ರೀತಿಯಲ್ಲಿ ನಡೆಸಿ ಉತ್ತೀರ್ಣನಾಗುತ್ತಾನೆ. ಆದರೆ ಕೊನೆಗೆ ಸಂದರ್ಶನ ಮಾಡಿದ ವ್ಯಕ್ತಿ ಶಂಭುವಿನ ಜೊತೆ ಹಣ(ಲಂಚ) ಎಷ್ಟು ಕೊಡ್ತೀರ ಅಂತ ಕೇಳ್ತಾನೆ. ಶಂಭುವಿಗೆ ಆಘಾತವಾಗುತ್ತದೆ. ಒಳ್ಳೆಯ ಪ್ರತಿಭೆ ಇದ್ದರೂ, ಸಂದರ್ಶನ ಒಳ್ಳೆಯ ರೀತಿಯಲ್ಲಿ ನಡೆಸಿದ್ದರು ಹಣ(ಲಂಚ) ಕೇಳುತ್ತಾರೆ ಎಂದು ಆಶ್ಚರ್ಯಚಕಿತನಾಗುತ್ತಾನೆ.

" ಹಲ್ಲಿದ್ದವನಿಗೆ ಕಡಲೆ ಇಲ್ಲ,ಕಡಲೆ ಇದ್ದವನಿಗೆ ಹಲ್ಲಿಲ್ಲ "ಎಂಬ ಗಾದೆಯಂತೆ ಪ್ರತಿಭೆ, ಸಾಮರ್ಥ್ಯ,ಇದ್ದವನಿಗೆ ಉದ್ಯೋಗ ಸಿಗಲಿಲ್ಲ, ಬದಲಾಗಿ ಸಾಮರ್ಥ್ಯ ಇಲ್ಲದವನಿಗೆ ಉದ್ಯೋಗ ಎಂಬಂತಾಗಿತ್ತು ಶಂಭುವಿನ ಪರಿಸ್ಥಿತಿ. ಅವನು ತುಂಬಾ ಸ್ವಾಭಿಮಾನದ ಹುಡುಗ. "ಹಂಗಿನ ಅರಮನೆಗಿಂತಾ ಗುಡಿಸಲೇ ಮೇಲು"ಎಂಬ ಮಾತಿನಂತೆ ಯೋಚಿಸುವವನು ಶಂಭು. ಅವನು ತನ್ನ ಸ್ವಾಭಿಮಾನವನ್ನು ಬಿಡಲು ತಯಾರಿರಲಿಲ್ಲ.

ಶಂಭುವಿಗೆ ಹಣ ಕೊಡುವುದು ತುಂಬಾ ಕಷ್ಟವಾದ ಮಾತಾಗಿತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೀಗಿದ್ದಾಗ ಹಣ ನೀಡುವುದು ಕಠಿಣವೆನಿಸಿತ್ತು. ಅವನು ಕೇವಲ ಒಂದು ಕಡೆ ಮಾತ್ರ ಕೆಲಸ ಕೇಳಲು ಹೋಗದೆ,ಬೇರೆ ಬೇರೆ ಕಡೆಗಳಲ್ಲಿ ಕೆಲಸಕ್ಕೆಂದು ಅರ್ಜಿ ಸಲ್ಲಿಸಿ, ಸಂದರ್ಶನವನ್ನು ಮಾಡುತ್ತಾನೆ.ಆದರೆ ಎಲ್ಲಾ ಕಡೆಯಿಂದಲೂ ಲಂಚ ಎಂಬುದು ಇದ್ದೇ ಇರುತ್ತಿತ್ತು.ಅವನು ಹಣಸಂಪಾದನೆಗಾಗಿ ನಗರಕ್ಕೆ ಬಂದಿದ್ದ.ಆದರೆ ಅಲ್ಲಿ ಕೆಲಸಕ್ಕೆ ಸೇರಲು ಕೂಡ ಹಣ ಕೊಡಬೇಕಾದ ಪರಿಸ್ಥಿತಿ.ಕಷ್ಟಪಟ್ಟು ಓದಿಯೂ ಕೆಲಸ ಸಿಗಲಿಲ್ಲವಲ್ಲ ಎಂಬ ಬೇಸರ ಒಂದುಕಡೆಯಿಂದಾದರೆ, ಮನೆಯ ಜವಾಬ್ದಾರಿ, ಸಮಸ್ಯೆಯು ಕಣ್ಮುಂದೆ ಬರುತ್ತಿತ್ತು. ಆದರೆ ಶಂಭು ಈ ವಿಷಯಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಧೈರ್ಯ ಕಳೆದುಕೊಳ್ಳದೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಮುಂದೇನು ಮಾಡಬಹುದು ಎಂದು ಯೋಚಿಸುತ್ತಾನೆ.

ಶಂಭುವಿಗೆ ತನ್ನಲ್ಲಿರುವ ಪ್ರತಿಭೆಗೆ,ಪ್ರಯತ್ನಕ್ಕೆ, ಕಷ್ಟಕ್ಕೆ ಪ್ರತಿಫಲ ಸಿಗಲಿಲ್ಲ ಎಂಬ ನೋವು ಇದ್ದರೂ ಮುಂದೆ ಹಳ್ಳಿಗೆ "ಬಂದ ದಾರಿಗೆ ಸುಂಕವಿಲ್ಲ" ಎಂಬಂತೆ ಮನೆಗೆ ಹಿಂದಿರುಗಿ ಬರುತ್ತಾನೆ. ಬೇರೆಯವರಂತೆ ಆತ್ಮಸ್ಥೈರ್ಯ ಕಳೆದುಕೊಳ್ಳದೆ,ಧೈರ್ಯ ಕಳೆದುಕೊಳ್ಳದೆ, ಯಾವುದನ್ನು ನಕರಾತ್ಮಕವಾಗಿ ತೆಗೆದುಕೊಳ್ಳದೆ ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಂಡು ಮನೆಗೆ ಬಂದು ಸ್ವಂತಿಕೆಯಿಂದ ಮುಂದೆ ಏನು ಮಾಡಬಹುದು ಎಂದು ಯೋಚಿಸುತ್ತಾನೆ.ಪದವಿ ಓದಿಯೂ ಕೆಲಸ ಸಿಗದಿದ್ದರೂ ತನ್ನ ಹಳ್ಳಿಯಲ್ಲಿ ಎರಡು ವರ್ಷ ಇತರೆ ಕೆಲಸಕ್ಕೆ ಹೋಗಿ ಹಣವನ್ನು ಕೂಡಿಡುತ್ತಾನೆ.ನಂತರದ ದಿನಗಳಲ್ಲಿ ಹಣದ ವ್ಯವಸ್ಥೆಯಾದ ನಂತರ ಬೇರೆ ಒಂದು ಒಳ್ಳೆಯ ಫಲವತ್ತಾದ ಭೂಮಿಯನ್ನು ಖರೀದಿಸುತ್ತಾನೆ. ತಾನು ಪದವಿ ಓದಿದವ ಹೇಗೆ ಕೆಲಸ ಮಾಡಲಿ ಎಂದು ಎಂದಿಗೂ ಯೋಚಿಸುವುದಿಲ್ಲ ಶಂಭು, ಬದಲಾಗಿ ಯಾವ ರೀತಿ ಮುಂದೆ ಬರಬಹುದು, ಯಾವ ರೀತಿ ಪ್ರಗತಿ ಸಾಧಿಸಬಹುದು ಎಂಬುದಾಗಿ ಯೋಚಿಸುತ್ತಾನೆ. ಆದರೂ ಹಳ್ಳಿಯ ಜನ ಶಂಭುವನ್ನು ಟೀಕಿಸುತ್ತಾರೆ. ಆದರೆ ಶಂಭು ಅದನ್ನು ಯಾವುದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ.

ಅವನು ತನ್ನ ಭೂಮಿಯಲ್ಲಿ ಕೃಷಿಕನಾಗಿ ಸ್ವಾವಲಂಬಿ ಜೀವನವನ್ನು ಆರಂಭಿಸುತ್ತಾನೆ.ತನ್ನ ಭೂಮಿಯಲ್ಲಿ ಒಳ್ಳೆಯ ಫಸಲು ಬರುವಂತೆ ತೋಟಗಾರಿಕೆಯನ್ನು ಆರಂಭಿಸುತ್ತಾನೆ.ಕೇವಲ ತೋಟಗಾರಿಕೆ ಮಾತ್ರವಲ್ಲದೇ ಹೈನುಗಾರಿಕೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಹೀಗೆ ಮುಂದೆ ಒಳ್ಳೆಯ ಫಲಾನುಭವವನ್ನು ಪಡೆಯುತ್ತಾನೆ.ನಂತರ ಹಲವಾರು ಕಡೆ ಭೂಮಿಯನ್ನು ಖರೀದಿಸಿ ಕೃಷಿ ಚಟುವಟಿಕೆಯನ್ನು ನಡೆಸುತ್ತಾನೆ.ಮುಂದೆ ತನ್ನ ಹಳ್ಳಿಯಲ್ಲಿ ಒಳ್ಳೆಯ ಕೃಷಿಕ ಎಂದು ಕರೆಯಲ್ಪಡುತ್ತಾನೆ.

ಶಂಭು ಒಂದು ಕ್ಷಣ ಕುಳಿತುಕೊಂಡು ತಾನು ಉದ್ಯೋಗಕ್ಕಾಗಿ ನಗರದಲ್ಲಿ ಅಲೆದಾಡಿದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾನೆ. ಹಾಗೆಯೇ ಸ್ವಾವಲಂಬಿ ಜೀವನ ನಡೆಸಲು ಆರಂಭಿಸಿದಾಗ ಹಳ್ಳಿಯ ಜನರು ಹೇಳುತ್ತಿದ್ದ ಮಾತುಗಳು, ಅಲ್ಲಿ ಆದಂತಹ ಅವಮಾನಗಳು ಎಲ್ಲವನ್ನು ನೆನಪು ಮಾಡಿಕೊಳ್ಳುತ್ತಾನೆ‌. ಇವೆಲ್ಲವನ್ನೂ ಮೆಟ್ಟಿ ನಿಂತ ಶಂಭು ಮುಂದೆ ತನ್ನದೇ ಆದಂತಹ ಒಳ್ಳೆಯ ಕಂಪೆನಿಯನ್ನು ನಡೆಸಲು ಯೋಚಿಸುತ್ತಾನೆ. ನಂತರ ತನ್ನದೇ ಹೆಸರಿನಲ್ಲಿ ಹಲವಾರು ಕಂಪನಿಗಳನ್ನು ನಡೆಸುತ್ತಾನೆ. ಅಷ್ಟು ಮಾತ್ರವಲ್ಲದೇ ತನ್ನಲ್ಲಿದ್ದ ಹೆಚ್ಚಿನ ಭೂಮಿಯನ್ನು ಲೀಸಕ್ಕೆ ಕೊಡುತ್ತಾನೆ.ಹೀಗೆ ಬಡತನ, ಕಷ್ಟದಲ್ಲಿ ಹುಟ್ಟಿದ ಶಂಭುವಿಗೆ ಮುಂದೆ ಶ್ರೀಮಂತಿಕೆ ಎಂಬುದು ತುಂಬಿಹೋಗುತ್ತದೆ. ಶಂಭು ಕೋಟ್ಯಾಧೀಶ್ವರನಾಗುತ್ತಾನೆ. ಆದರೂ ಎಂದಿಗೂ ಅವನು ತನ್ನ ಶ್ರೀಮಂತಿಕೆಯನ್ನು ತೋರಿಸಿಕೊಡುವುದಿಲ್ಲ.

ಶಂಭು ತನ್ನ ಸ್ವಾಭಿಮಾನವನ್ನು ಬಿಡದೆ, ತನ್ನ ಸತತ ಪ್ರಯತ್ನದಿಂದ ಶ್ರೀಮಂತನಾಗುತ್ತಾನೆಯೇ ಹೊರತು, ಸ್ವಾಭಿಮಾನ ಬಿಟ್ಟು, ಲಂಚ ಕೊಟ್ಟು ಕೆಲಸ ಮಾಡಲು ತಯಾರಿಲ್ಲದ್ದ ಕಾರಣ ಅವನ ಸ್ವಂತಿಕೆ ಉಪಯೋಗಿಸಿ ಉನ್ನತ ಸ್ಥಾನಕ್ಕೆ ಬರಲು ಕಾರಣವಾಗುತ್ತದೆ. "ಮನಸ್ಸಿದ್ದರೆ ಮಾರ್ಗ" ಎಂಬ ಗಾದೆಯಂತೆ ಶಂಭುವಿನ ಸತತ ಪ್ರಯತ್ನ,ಛಲ, ಹಠ,ಕಠಿಣ ಪರಿಶ್ರಮದಿಂದಾಗಿ ಶ್ರೀಮಂತನಾಗುತ್ತಾನೆ. ಶಂಭುವಿಗೆ ತನ್ನಲ್ಲಿದ್ದ ಸಾಮರ್ಥ್ಯ ಪ್ರತಿಫಲ ಬಂದಾಗ ಅರ್ಥವಾಗುತ್ತದೆ.ಶಂಭುವಿನ ಪ್ರಾಮಾಣಿಕ ಪ್ರಯತ್ನಕ್ಕೆ ಭೂಮಿ ತಾಯಿ ಒಳ್ಳೆಯ ಪ್ರತಿಫಲ ನೀಡುತ್ತಾಳೆ.ನಂತರ ಅವನು ಒಬ್ಬ ಒಳ್ಳೆಯ ಉದ್ಯಮಿಯಾಗಿ ಹೊರಹೊಮ್ಮುತ್ತಾನೆ. ಮುಂದೆ ಶಂಭುವಿನ ಧೈರ್ಯ, ಪ್ರಯತ್ನ, ಸ್ವಂತಿಕೆ, ಸ್ವಾಭಿಮಾನ ಎಲ್ಲರಿಗೂ ಸ್ಪೂರ್ತಿದಾಯಕವಾಗುತ್ತದೆ. "ಕೈ ಕೆಸರಾದರೆ ಬಾಯಿ ಮೊಸರು"ಎಂಬ ಮಾತಿನಂತೆಯೇ ಶಂಭು ಕಷ್ಟಪಟ್ಟು ದುಡಿದು ಶ್ರೀಮಂತನಾಗುತ್ತಾನೆ.

✍️ ಸೌಮ್ಯ.ಸಿ.ಡಿ.ಎಲಿಮಲೆ
ತೃತೀಯ ಕಲಾ ವಿಭಾಗ
ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ

Comments